Name:
Location: Bangalore, Karnataka, India

Friday, November 18, 2005

ಮಧುರ ಸ್ಮೃತಿ

– ಮಧುರ ಸ್ಮೃತಿ —

(Reminiscences of Swami Purushottamanandaji Mj., ex-president of Ramakrishna Sarada math, Ponnampet, Koorg, Karnataka. The article is in Unicode Kannada and the author was a student of Shri Ramakrishna Vidyashala, Mysore)

ಸುಮಾರು ಎಂಟು - ಒಂಭತ್ತು ವರ್ಷಗಳ ಹಿಂದಿನ ಮಾತು. ನಾವಾಗ ವಿದ್ಯಾಶಾಲೆಯಲ್ಲಿ ದ್ವಿತೀಯ ಪದವಿಪೂ‍ರ್ವ ವರ್ಗದಲ್ಲಿ ಓದುತ್ತಿದ್ದೆವು. ಪೂರ್ವ ಸಿದ್ಧತಾ ಪರೀಕ್ಷೆಗಳ ನಂತರ ಓದಿ-ಓದಿ ದಣಿದಿದ್ದ ನಮ್ಮ ಮನಸ್ಸಿಗೆ ಉಲ್ಲಾಸ- ನವೋತ್ಸಾಹಗಳನ್ನು ಒದಗಿಸಲು ಎರಡು ದಿನಗಳ ಪ್ರವಾಸವನ್ನು ಏರ್ಪಸಿ ಮೊದಲ ದಿನದ ರಾತ್ರಿಯ ಭೋಜನ ಮತ್ತು ವಸತಿಯ ವ್ಯವಸ್ಥೆ ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದಲ್ಲಿ. ಅದರ ಅಧ್ಯಕ್ಷರಾದ ಸ್ವಾಮಿ ಪುರುಷೋತ್ತಮಾನಂದರನ್ನು, ಅವರ ಲೇಖನ ಮತ್ತು ಧ್ವನಿ ಸುರಳಿಗಳ ಮೂಲಕ ಬಲ್ಲ ನಮಗೆ, ಪ್ರತ್ಯಕ್ಷವಾಗಿ ಕಾಣುವ ಕುತೂಹಲ-ಉತ್ಸಾಹ.

ನಾವೆಲ್ಲ ಊಟ ಮಾಡುವಾಗ ಅವರು ಭೋಜನಶಾಲೆಯನ್ನು ಪ್ರವೇಶಿಸಿದರು. ನಾವಾಗ ನಮ್ಮ ನಮ್ಮಲ್ಲೇ ಪಿಸುಗುಡುತ್ತ ಮಾತುಕತೆಯಲ್ಲಿ ವ್ಯಸ್ತರಾಗಿದ್ದೆವು. ಅವರು ಭೋಜನಶಾಲೆಯಲ್ಲಿ ನಡೆದಾಡುತ್ತ, ಮುಗುಳ್ನಗುತ್ತ "ಊಟ ಮಾಡುವಾಗ ಮಾತನಾಡಬಾರದು ! ಏಕೆ ? ನಮ್ಮ ಲಕ್ಷ್ಯ ಊಟದ ಕಡೆಗಿರದೆ ಮಾತಿನ ಕಡೆಗಿರುತ್ತದೆ. ಮೌನಂ ಕವಳಂ ಜಾಸ್ತಿ !! ಸಮಾರಂಭವೊಂದರಲ್ಲಿ ಭಾರೀ ಭೋಜನವನ್ನು ಏರ್ಪಡಿಸಿದ್ದರು. ಅತಿಥಿಗಳು ಊಟಮುಗಿಸಿ ತೆರಳಲು ಅಣಿಯಾಗುತ್ತಿರುವಾಗ ಅತಿಥೇಯರು ಅಡುಗೆ ಹೇಗಿತ್ತು ಎಂದು ಕೇಳಿದರು. ಆಗಲೇ ಅವರಿಗೆ ಅರಿವಾದದ್ದು ಹರಟೆಯಲ್ಲಿ ತಾವು ಅಡಿಗೆಯ ರುಚಿಯನ್ನೇ ಗಮನಿಸಲಿಲ್ಲ ಎಂದು !! (ನಗು ...) ಊಟವನ್ನು ಆಸ್ವಾದಿಸಬೇಕು. ಅಮ್ಮ ಪ್ರೀತಿಯಿಂದ, ಪರಿಶ್ರಮದಿಂದ ಮಾಡಿದ ಅಡುಗೆಯನ್ನು ಗಮನವಿಟ್ಟು ತಿನ್ನಬೇಕು, ಆಹಾರವನ್ನು ಚೆಲ್ಲಬಾರದು" ಎಂದು ಮೃದುವಾಗಿ ನುಡಿದರು.

ಮರುದಿನ ಬೆಳಿಗ್ಗೆ ಉಷಾಕೀರ್ತನೆಯ ಸಮಯದಲ್ಲಿ "ಶ್ರೀರಾಮ ತುಹಿ, ಶ್ರೀಕೃಷ್ಣ ತುಹಿ" ಮುಂತಾದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಹಳೆಯದಾದ ಆ ಪ್ರಾರ್ಥನಾಮಂದಿರವನ್ನು ನವೀಕರಿಸುವ ಕೆಲಸಗಳು ಆಗ ನಡೆದಿದ್ದವು.

ಪ್ರಾರ್ಥನಾ ಮಂದಿರದ ಹೊರಗೆ, ಹೊರಟುನಿಂತ ನಮ್ಮನ್ನು ಉದ್ದೇಶಿಸಿ ನಾಲ್ಕಾರು ಮಾತುಗಳನ್ನಾಡುವಂತೆ ಪೂಜ್ಯರನ್ನು ಬ್ರ. ಪ್ರಜ್ಞಾ ಚೈತನ್ಯರು (ಈಗ, ಸ್ವಾಮಿ ಆತ್ಮಶ್ರದ್ಧಾನಂದರು) ವಿನಂತಿಸಿದರು. ಆಗ ಸ್ವಾಮೀಜೀ "ಮಾತೇ ಸರಸ್ಟತಿ ಮಾತೆ ! ಆ ಮಾತೆಯನ್ನು ಅರ್ಚಿಸುವುದು ಹೇಗೆ ? ಬಹಳ ಸುಲಭ. ಸತ್ಯವಾದ ಮಾತುಗಳೇ ಸುಂದರವಾದ ಪುಷ್ಪಗಳು. ಹಿತವಾಗಿ ಮಾತನಾಡುವಾ ! ಮಿತವಾಗಿ ಮಾತನಾಡುವಾ !! ಪ್ರೀತಿಯಿಂದ ಮಾತನಾಡುವಾ!!!" ಎಂದು ತಮ್ಮ 'ನಾಲ್ಕಾರು' ಮಾತುಗಳನ್ನು ಮುಗಿಸಿ ನಮ್ಮನ್ನೆಲ್ಲ ನಗುನಗುತ್ತ ಬೀಳ್ಕೊಟ್ಟರು.

0 Comments:

Post a Comment

<< Home